ಕೋಲುವರಿಸೆ

ಪ್ರಥಮ ಮಹಾಯುದ್ಧದ ವರೆಗೂ ಯೂರೋಪ್ ಮತ್ತು ಅಮೆರಿಕದ ಆದ್ಯಂತ ವಾಡಿಕೆಯಲ್ಲಿದ್ದ ಒಂದು ಆಟ. ಇದು 400 ವರ್ಷಗಳ ಹಿಂದೆ ಇಂಗ್ಲೆಂಡಿನ ಸಾಮರ್‍ಸೆಟ್ ಮತ್ತು ಬರ್ಕ್‍ಷೈರ್ ಪ್ರಾಂತ್ಯಗಳಲ್ಲಿ ಪ್ರಾರಂಭವಾಯಿತು. ಇಂಗ್ಲೆಂಡಿನ ಮೊದಲನೆಯ ಮತ್ತು ಎರಡನೆಯ ಜಾರ್ಜ್ ದೊರೆಗಳ ಕಾಲದಲ್ಲಿ ಈ ಆಟ ಬಹುಜನಪ್ರಿಯವಾಗಿತ್ತು. ಇದರಲ್ಲಿ ಮೂರು ಮಾದರಿಗಳಿವೆ-ಬೊಂಬಿನಿಂದ ಮಾಡಿದ ಬೆತ್ತದ ವರಿಸೆ; ಒಂಟಿಕೋಲುವರಿಸೆ; ಎರಡು ಕೈಗಳಿಂದಲೂ ಹಿಡಿದುಕೊಂಡ ಕೋಲಿನ ವರಿಸೆ. ಅವುಗಳಲ್ಲಿ ಒಂಟಿಕೋಲು ವರಿಸೆಯೇ ಮುಖ್ಯವಾದದ್ದು. ಒಂಟಿಕೋಲು ತೆಳು ಮತ್ತು ಗುಂಡಗಿರುತ್ತದೆ. ಇದನ್ನು ಸುಮಾರು ಆಷ್ ಎಂಬ 34" ಉದ್ದದ ಒಂದು ತೇಗದ ಮರದಿಂದ ತಯಾರಿಸುತ್ತಾರೆ. ಇದಕ್ಕೆ ಬುಟ್ಟಿ ಹೆಣಿಗೆಯ ಕೈಕಾಪು ಹಿಡಿ ಉಂಟು. ಒಂಟಿಕೋಲಿನ ಒಂದು ಕೊನೆ ಇನ್ನೊಂದು ಕೊನೆಗಿಂತ ಹೆಚ್ಚು ದಪ್ಪ. ದಪ್ಪಕೊನೆ ಕೈಯನ್ನು ರಕ್ಷಿಸಲು ಬಟ್ಟಲು ಆಕಾರದ ಹಿಡಿಯಲ್ಲಿ ತೂರಿದೆ. ಈ ಕೋಲು ಎದುರಾಳಿಯನ್ನು ಮೇಲ್ವಾಯುವುದಕ್ಕೂ ಅವನ ಆಕ್ರಮಣವನ್ನು ನಿವಾರಿಸುವುದಕ್ಕೂ ಉಪಯೋಗಿಸುವ ಒಂದು ಆಯುಧ. ಮೊಟ್ಟಮೊದಲು 16ನೆಯ ಶತಮಾನದಲ್ಲಿ ಈ ಆಯುಧ ಬ್ಯಾಕ್‍ಸೋರ್ಡ್ ಎಂಬ ಕತ್ತಿಯ ಆಕಾರದಲ್ಲಿ ಮರದ ಕತ್ತಿಯಾಗಿತ್ತು. ಮತ್ತು ಅದರ ಕೆಲವು ಕ್ರಮಗಳನ್ನೂ ಅನುಸರಿಸಿತ್ತು. ಆದ್ದರಿಂದ ಬ್ಯಾಕ್‍ಸೋರ್ಡ್ ವರಿಸೆಯನ್ನು ಕಲಿಯಲು ಈ ಮರದ ಕತ್ತಿಯಿಂದ ಅಭ್ಯಾಸ ಮಾಡುತ್ತಿದ್ದರು. 17ನೆಯ ಶತಮಾನದಲ್ಲಿ ಕತ್ತಿಯ ಆಕಾರ ಹೋಗಿ ಕೋಲಿನಂತಾಗಿ ಬುಟ್ಟಿ ಹೆಣಿಗೆಯ ಕೈಕಾಪು ಸೇರಿಸಲ್ಪಟ್ಟಿತು.

ಕೋಲುವರಿಸೆಯಲ್ಲಿ ತಿವಿಯುವುದು ನಿಷೇಧಿಸಲ್ಪಟ್ಟಿತ್ತು. ನಡುಕಟ್ಟಿನ ಕೆಳಗೆ ಹೊಡೆಯಕೂಡದೆಂಬ ಕಟ್ಟಲೆ 16ನೆಯ ಶತಮಾನದಲ್ಲಿ ಇತ್ತು. 18ನೆಯ ಶತಮಾನದಲ್ಲಿ ಅದು ಹೋಗಿ ಎದುರಾಳಿಯ ಮೈಯ ಯಾವ ಭಾಗವನ್ನಾದರೂ ಮುಟ್ಟಿದಲ್ಲಿ ಅದು ಹೋಗಿ ಎದುರಾಳಿಯ ಮೈಯ ಯಾವ ಭಾಗವನ್ನಾದರೂ ಮುಟ್ಟಿ ಆಕ್ರಮಣ ಮಾಡಬಹುದೆಂಬ ಕ್ರಮ ಬಂದಿತು. ಕೋಲುವರಿಸೆ ಕಾಳಗದಲ್ಲಿ ಇಬ್ಬರು ವರಿಸೆದಾರರೂ ಎದುರೆದುರಿಗೆ ನಿಂತು ಪರಸ್ಪರ ಕೋಲಿನಿಂದ ಹೊಡೆಯಲು ಗುರಿ ಇಡುತ್ತಾರೆ. ಕತ್ತಿವರಿಸೆಯಲ್ಲಿ ಕಾಲುಗಳ ಸಂಚಲನಗಳಿಂದ ಪ್ರದರ್ಶಿಸುವ ಭಾವಭಂಗಿಗಳು ಒಂಟಿಕೋಲುವರಿಸೆಯಲ್ಲಿಲ್ಲ. ಇಡೀ ಕಾಳಗದ ಅವಧಿಯಲ್ಲಿ ಇಬ್ಬರೂ ಕಾಲುಗಳ ಚಲನೆಗಳಿಲ್ಲದೆ ಒಂದೇ ನೆಲೆಯಲ್ಲಿ ನಿಂತಿರಬೇಕು. ಕೋಲನ್ನು ಹಿಡಿದಿರುವ ಬಲಗೈಯನ್ನು ತಲೆಯ ಮೇಲೆ ಎತ್ತರಕ್ಕೆ ಚಾಚಿ ಕೈಹರಡನ್ನು ಚಾವಟಿಯಂತೆ ಬಲವಾಗಿ ತಿರುಗಿಸುತ್ತ ಕೋಲಿನಿಂದ ಹೊಡೆತಗಳನ್ನು ಕೊಡುತ್ತಾರೆ. ಎದುರಾಳಿಯ ನಡುವಿನ ಮೇಲೆ ಶರೀರದ ಯಾವ ಭಾಗವನ್ನಾದರೂ ಹೊಡೆಯಬಹುದಾದರೂ ನಿಜವಾದ ಗುರಿ ತಲೆ. ತಲೆ ವಿನಾ ಬೇರೆ ಭಾಗಗಳಲ್ಲಿನ ಹೊಡೆತಗಳಿಗೆ ಎಣಿಕೆಯಿಲ್ಲ. ಅವು ಎದುರಾಳಿಯ ಲಕ್ಷ್ಯವನ್ನು ಬೇರೆ ಕಡೆ ತಿರುಗಿಸಿ ಎಚ್ಚರಿಕೆಯನ್ನು ಅಡರಿಸುವ ತಂತ್ರದ ಹೊಡೆತಗಳು. ರಕ್ತಬರುವಂತೆ ತಲೆಗೆ ಹೊಡೆದರೇ ಅದಕ್ಕೆ ಎಣಿಕೆ. ಅದಕ್ಕೆ ತಲೆ ಒಡೆಯುವುದು ಎಂದು ಹೆಸರಿತ್ತು. ಇಬ್ಬರು ಸ್ಪರ್ಧಿಗಳಲ್ಲಿ ಯಾರು ಎದುರಾಳಿಯ ತಲೆಯನ್ನು ಮೊದಲು ಒಡೆಯುತ್ತಾನೋ ಅವನೇ ಗೆದ್ದವನೆಂದು ನಿರ್ಣಯ.

ಕೋಲುವರಿಸೆ ಆಟ 19ನೆಯ ಶತಮಾನದ ಕೊನೆಯಲ್ಲಿ ನಿಂತುಹೋಯಿತು. ಇಟಲಿಯಿಂದ ಹೊಸದಾಗಿ ಬಂದ ಕೊಂಕುಕತ್ತಿವರಿಸೆ ಕೋಲುವರಿಸೆಯ ಸದೃಶವಾಗಿತ್ತು. ಆದ್ದರಿಂದ ಕೊಂಕುಕತ್ತಿವರಿಸೆಯನ್ನು ಕೋಲುವರಿಸೆಯ ಅಭ್ಯಾಸದಿಂದ ಕಲಿಸಲು ಶಿಕ್ಷಣ ಕೇಂದ್ರಗಳು ಸ್ಥಾಪಿತವಾಗಿ, ಕೋಲುವರಿಸೆ ಪುನರುಜ್ಜೀವನವಾಯಿತು. ಕೋಲಿಗೆ ಮೊನೆಯನ್ನು ಕೊಡಲಾಯಿತು. ಕೋಲಿನಿಂದ ಕಾಲಿಗೂ ಹೊಡೆಯಲು ಅನುಮತಿ ಬಂದಿತು. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಕೋಲುವರಿಸೆ ಬಹಳ ಅಲಕ್ಷಿಸಲ್ಪಟ್ಟಿತು. ಇಟಲಿಯ ಹಗುರಾದ ಕುಡುಗತ್ತಿ ಪ್ರಾಬಲ್ಯಕ್ಕೆ ಬಂದು ಕೋಲುವರಿಸೆಯ ಅಗತ್ಯವನ್ನು ಕುಂದಿಸಿತು. ಫ್ರೆಂಚರ ಬೆತ್ತದ ವರಿಸೆ ಕೋಲುವರಿಸೆಯಂತಿದೆ; ಆದರೆ ಅದನ್ನು ಕೊಂಕುಕತ್ತಿವರಿಸೆಯ ಶಿಕ್ಷಣಕ್ಕೆ ಅಳವಡಿಸಿಕೊಳ್ಳಲಿಲ್ಲ.						 (ಎಂ.ಜಿ.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ